ಬಯಲುಸೀಮೆಯವರ `ಅನ್ನ’ದ ಋಣ

anna-kannada-Movie
ಅನ್ನ ಕನ್ನಡ ಸಿನಿಮಾ ಅತೀ ಶೀಘ್ರದಲ್ಲಿ ನಿಮ್ಮ ನೆಚ್ಚಿನ ಚಿತ್ರ ಮಂದಿರಗಳಲ್ಲಿ

ಮೈಸೂರು: ಇತ್ತೀಚೆಗೆ ಪ್ರಿಮೀಯರ್ ಶೋ ಕಂಡ ಹಲವು ಕಲಾತ್ಮಕ ಚಿತ್ರಗಳ ಪೈಕಿ ಹೆಚ್ಚು ಕಾಡಿದ, ನಮ್ಮದೇ ಬದುಕಿನ ಬವಣೆಯನ್ನು ಪ್ರತಿನಿಧಿಸುವ ಕಥೆಯುಳ್ಳ ಚಿತ್ರ ಅನ್ನ’ವೂ ಒಂದು. ಈ ಚಿತ್ರವು ಇನ್ನೂ ಮಲ್ಟಿಪ್ಲೆಕ್ಸ್, ಚಿತ್ರಮಂದಿರ ಅಥವಾ ಒಟಿಟಿಯಲ್ಲಿ ಪ್ರದರ್ಶನ ಕಂಡಿಲ್ಲ. ಕೆಲವು ಕಡೆ ಪ್ರೀಮಿಯರ್ ಶೋ ಮುಗಿಸಿರುವಅನ್ನ’ವನ್ನು ನೋಡಿದೆ ಸೀಮಿತ ಪ್ರಜ್ಞಾ ಕಲಾಸಕ್ತರು ಪೂರ್ಣಾಂಕ ನೀಡಿದ್ದಾರೆ. ಪ್ರಶಸ್ತಿಯನ್ನು ಬಾಚುವ ಗಟ್ಟಿತನ ಚಿತ್ರಕ್ಕಿದೆ. ಪಕ್ಕಾ ಹಳ್ಳಿ ಸೊಗಡಿನ, ನೋಡಿದವರ ಕಂಗಳಲ್ಲಿ ಹನಿ ನೀರು ಜಿನುಗಿಸುವಷ್ಟು ಕಥೆಯ ಸೊಬಗು ಮೂಡಿಬಂದಿದೆ.

ಕನ್ನಡ ಸಿನೆಮಾ ರಂಗ ಇಂದು ಕೋಟ್ಯಂತರ ರೂಪಾಯಿ ಬಂಡವಾಳ ಹೂಡುವಷ್ಟರ ಮಟ್ಟಿಗೆ ಬೆಳೆದಿದೆ. ಅದೇ ರೀತಿ ಕ್ರೌಡ್ ಫಂಡಿಂಗ್ ಮಾಡಿಯೂ ಚಿತ್ರ ನಿರ್ಮಿಸಬಹುದು ಎಂಬುದನ್ನು ಹೇಳಿಕೊಟ್ಟ ಯುವ ನಿರ್ದೇಶಕ ಇಸ್ಲಾವುದ್ಧಿನ್ ಈ ಹಿಂದೆಯೇ ನಮಗೂ ಸ್ವಲ್ಪ ಜಾಗ ಕೊಡಿ’ ಸಿನೆಮಾ ಮಾಡಿ ಗೆದ್ದವರು.

ಟ್ಯಾಲೆಂಟ್ ಇದ್ದರೂ ಅವಕಾಶಗಳ ಕೊರತೆಯಿಂದ ದೂರವೇ ಉಳಿದಿದ್ದ ಇಸ್ಲಾ ಈಗ ಅನ್ನ’ ಚಿತ್ರದ ಮೂಲಕ ಕನ್ನಡ ಸಿನಿರಸಿಕರಿಗೆ ನಾವೀನ್ಯ ರೀತಿಯ ಕಥೆ ಹೇಳಲು ಬಂದಿದ್ದಾರೆ.

ಅನ್ನ’ ಚಿತ್ರ ಶೀರ್ಷಿಕೆಯೇ ಹೇಳುವಂತೆ ಇದು ಪಕ್ಕ ಹಸಿವಿಗೆ ಸಂಬಂಧಿಸಿದ್ದು ಮತ್ತು ಸ್ಪಂದಿಸಿದ ಸಿನೆಮಾ. ಬಯಲುಸೀಮೆಯಾದ ಚಾಮರಾಜನಗರ ಜಿಲ್ಲೆಯೊಂದರಲ್ಲಿ 1980ರ ದಶಕದಲ್ಲಿ ಅನ್ನಕ್ಕಾಗಿ ಪರಿತಪಿಸುತ್ತಿದ್ದ ಜನರ ಬವಣೆಯನ್ನು ತಿಟ್ಹತ್ತಿ ತಿರುಗಿ ನೋಡಿದಾಗ ಕಂಡ ದೃಶ್ಯಾವಳಿಗಳೇ ಅನ್ನ’ ಚಿತ್ರದಲ್ಲಿ ದಾಖಲಾಗಿವೆ. ಚಿತ್ರಕ್ಕೆ ಕಥೆ ಒದಗಿಸಿರುವ ಸಾಹಿತಿ ಹನೂರು ಚನ್ನಪ್ಪ ಅವರ ಜೀವನದಲ್ಲಿ ನಡೆದ ನಿಜ ಘಟನೆಯೇ ಈ ಚಿತ್ರದ ತಿರುಳು.

ಚಾಮರಾಜನಗರ ಜಿಲ್ಲೆಯ ಬಯಲುಸೀಮೆ ಮತ್ತು ಮಂಡ್ಯದ ಗದ್ದೆ ಸೀಮೆ ನಡುವಿನ ಬಾಂಧವ್ಯ ಆಗಿನ ಕಾಲಕ್ಕೆ ಹೇಗಿತ್ತು ಎಂಬುದ ಕಥೆಯಲ್ಲಿ ಬಂದು ಹೋಗುತ್ತದೆ. ಚಿತ್ರದ ಪ್ರಮುಖ ಪಾತ್ರಧಾರಿ ಆರು ವರ್ಷದ ಮಹಾದೇವ. ಈ ಬಾಲಕ ಹುಟ್ಟಿದ ದಿನಮಾನದಲ್ಲಿ ಬಾಣಂತಿಯಾಗಿದ್ದ ತನ್ನವ್ವ ಅನ್ನ ತಿಂದಿದ್ದು ಬಿಟ್ಟರೆ ಮಗ ಬೆಳೆದು ಸ್ಕೂಲಿಗೆ ಹೋಗುವ ದಿನಗಳನ್ನು ಎಣಿಸುವಾಗಲೂ ತುತ್ತು ಅನ್ನ ಅವರ ಕೈ-ಬಾಯ್ ಸೇರಲಿಲ್ಲ. ಮಹಾದೇವನ ಬಾಯಲ್ಲಿ ಕೇಳುತ್ತಿದ್ದ ಪದವೊಂದೆ, `ಅವ್ವೈ ನಂಗೆ ಅನ್ನ ಮಾಡಾಕಲ್ವ.. ಅಪ್ಪ ರಾಗಿ ತಂದ್ರೆ ನಾನಂತು ಸ್ಕೂಲಿಗೆ ಹೋಗಲ್ಲ, ಅನ್ನ ಮಾಡಾಕೋಟ್ರೆ ಸ್ಕೂಲಿಗೆ ಹೋಗದು’ ಎಂಬ ಮಾತುಗಳಲ್ಲಿನ ಆರ್ದೃತೆ ಚಿತ್ರದ ಓಗ ಹೆಚ್ಚಿಸುತ್ತದೆ.

ಮಹಾದೇವನ ಪಾತ್ರದಲ್ಲಿ ನಟಿಸಿರುವ ಮಾಸ್ಟರ್ ಜಿ.ಎನ್. ನಂದನ್ ಸಹಜ ನಟನೆಯಲ್ಲಿ ಪಾತ್ರಕ್ಕೆ ಜೀವ ತುಂಬಿದ್ದಾನೆ. ಮಹಾದೇವನ ತಂದೆಯ ಪಾತ್ರದಲ್ಲಿ ಸಂಪತ್ ಮೈತ್ರೇಯಾ, ತಾಯಿ ಪಾತ್ರದಲ್ಲಿ ಸಿ.ಆರ್.ಪದ್ಮಶ್ರೀ ಸೊಗಸಾಗಿ ನಟಿಸಿದ್ದಾರೆ. ಚಾಮರಾಜನಗರ ಭಾಷೆಯನ್ನೇ ಹೋದ್ದುಕೊಂಡಂತೆ ಸಂಭಾಷಣೆಗಳನ್ನು ಸ್ಫುರಿಸಿದ್ದಾರೆ. ಇಡೀ ಸಿನೆಮಾದಲ್ಲಿ ಬಂದು ಹೋಗುವ ಇತರೆ ಪಾತ್ರಗಳೂ ಚಾಮರಾಜನಗರ ಭಾಷೆಯನ್ನು ಕಿವಿಯಲ್ಲಿ ಗೂಂಯ್ ಗುಡಿಸುತ್ತವೆ. ಬಹುತೇಕ ನಟರು ರಂಗಭೂಮಿ ಹಿನ್ನಲೆಯವರಾದ್ದರಿಂದ ನಿರ್ದೇಶನಕರಿಗೆ ತ್ರಾಸ ಕಡಿಮೆಯಾಗಿದೆ. ಅವರು ಹೆಚ್ಚಿನ ಗಮನನ್ನು ಕಥೆ ಹೇಳುವ ಪ್ರಕ್ರಿಯೆಗೆ, ಮಲೆ ಮಹದೇಶ್ವರ ಬೆಟ್ಟದ ವನಸಿರಿ ಪರಿಚಯಕ್ಕೆ ವ್ಯಯಿಸಿದ್ದಾರೆ.

ಮಹಾದೇವ ತನ್ನ ಪೋಷಕರೊಂದಿಗೆ ಮಾದಪ್ಪನ ಜಾತ್ರೆಗೆ ಹೋಗಿದ್ದಾಗ ಅಚನಾತ್ತಾಗಿ ತಪ್ಪಿಸಿಕೊಳ್ಳುತ್ತಾನೆ. ಅಲ್ಲಿಗೆ ಬಂದಿದ್ದ ಮಂಡ್ಯ ಮೂಲದ ಜೀಮಿನ್ದಾರರೊಬ್ಬರ ಕಾರಿನ ಡಿಕ್ಕಿಯಲ್ಲಿ ಬಚ್ಚಿಟ್ಟುಕೊಂಡು ನಾಪತ್ತೆಯಾಗುತ್ತಾನೆ. ಜಮೀನ್ದಾರನು (ಹಿರಿಯ ನಟ ಬಾಲ ರಾಜ್ವವಾಡಿ) ಮಾದಪ್ಪನ ಜಾತ್ರೆ ಮುಗಿಸಿ ಊರು ತಲುಪಿದಾಗ ಕಾರಿನಲ್ಲಿ ಮಹಾದೇವ ಇದ್ದದ್ದು ಗೊತ್ತಾಗುತ್ತದೆ. ಜಮೀನ್ದಾರನ ಪತ್ನಿ(ಭುವನೇಶ್ವರಿ)ಗೆ ಮಹಾದೇವ ಕಳೆದು ಹೋದ ತನ್ನ ಮಗನೇ ಇರಬೇಕು ಎಂಬ ಹಳೆ ನೆನಪು ಥೇಟ್ ನೆನಪಿಗೆ ಬರುತ್ತದೆ. ಆತನನ್ನು ತನ್ನ ಮನೆಯಲ್ಲಿಯೇ ಇರಿಸಿಕೊಳ್ಳಲು ಒಪ್ಪುತ್ತಾರೆ. ಇತ್ತ ಮಹಾದೇವನನ್ನು ಕಳೆದುಕೊಂಡ ಪೋಷಕರು ಹುಡುಕುತ್ತಾ, ಸಾಲ ಮಾಡಿಕೊಂಡು ದಿನದೂಡುತ್ತಾರೆ. ಅತ್ತ ಮಹಾದೇವ ಜಮೀನ್ದಾರರ ಮನೆಯಲ್ಲಿ ದಿನವೂ ಅನ್ನ ತಿಂದುಕೊಂಡು, ಅವರು ವಹಿಸುತ್ತಿದ್ದ ಚೂರುಪಾರು ಕೂಲಿ ಕೆಲಸ ಮಾಡಿಕೊಂಡು ಜತೆಗಿರುತ್ತಾನೆ. ಈ ನಡುವೆ ಬಂದು ಹೋಗುವ ಜಮೀನ್ದಾರನ ಮಗಳ ಪ್ರೇಮ ನಿವೇದನೆ, ಮದುವೆ ಮಾಡಿಕೊಳ್ಳಲು ತಾಯಿಗೆ ದುಂಬಾಲು ಬೀಳುವ ಯುವಕನೊಬ್ಬನ ಪಡಿಪಾಟಲು ಪ್ರೇಕ್ಷಕರಲ್ಲಿ ನಗೆಬುಗ್ಗೆ ಚಿಮ್ಮುಸುತ್ತದೆ. ಇವರಿಗೆ ಮಹಾದೇವ ಸಹಾಯಕನು ಆಗುತ್ತಾನೆ .

ಕಳೆದುಕೊಂಡ ಮಗನನ್ನು ಹುಡುಕಿಕೊಂಡ ಹೊರಟ ಮಹಾದೇವನ ಪೋಷಕರಿಗೆ ಆತ ಸಿಗುತ್ತಾನೆ. ಜಮೀನ್ದಾರರ ಮನೆ ಬಾಗಿಲು ಎಡತಾಕಿ, ನಮ್ ಮಗನ ನಮ್ಗೆ ಕೊಟ್ಬುಡಿ ಸ್ವಾಮಿ. ಬಾರ್ಲಾ ಮಾದೇವ ಎಂಬ ತಾಯಿ ವೇದನೆಗೆ, ಆ ಕಡೆಯಿಂದ ಮಹಾದೇವ ನಿಮ್ಮ ಮನೆಗೆ ಬಂದ್ರೆ ಅನ್ನ ಇಕ್ದೆಯಾ.. ಅನ್ನ ಹಾಕೊಟ್ರೆಯಾ ನಾ ಬರೋದು’ ಎಂಬ ಶಬ್ದ ಅನುರಣಿಸುತ್ತದೆ. ಆ ದೃಶ್ಯ ನೋಡುಗರ ಕಣ್ಣಲ್ಲಿ ನೀರು ತರಿಸುತ್ತದೆ. ಚಿತ್ರಕ್ಕೆ ಪೂರಕವಾಗಿ ನಾಗೇಶ್ ಕಂದೇಗಾಲ ಮನೋಜ್ಞ ಸಂಗೀತ ಸಂಯೋಜನೆ ನೀಡಿದ್ದಾರೆ. `ಮರಳಿ ಬಾರದೂರಿಗೆ..’ ಗೀತೆ ರಚನೆಕಾರರಾದ ಡಾ.ಎನ್.ಕೆ.ಲೋಲಾಕ್ಷಿ ಈ ಚಿತ್ರಕ್ಕೂ ಟೈಟಲ್ ಸಾಂಗ್ ಬರೆದಿದ್ದಾರೆ. ಅದನ್ನು ಸಂಗೀತ ನಿರ್ದೇಶಕ ರಘು ದೀಕ್ಷಿತ್ ಹಾಡಿದ್ದಾರೆ. ಛಾಯಾಗ್ರಾಹಕ ಮಧು ಸುಗತ ಚಾಮರಾಜನಗರ ಐಸಿರಿಯನ್ನು ಕಣ್ಣಿಗೆ ಕಟ್ಟುವಂತೆ ಸೆರೆ ಹಿಡಿದಿದ್ದಾರೆ. ಸಿದ್ದು ಪ್ರಸನ್ನ ಅವರ ಸಂಭಾಷಣೆ ಚಾಮರಾಜನಗರ ಭಾಷೆಯ ಸೌಂದರ್ಯವನ್ನು ಉಣಬಡಿಸುತ್ತದೆ.

ಇದೀಗ ಅನ್ನ ಚಿತ್ರದ ಮತ್ತೊಂದು ಗೀತೆ ‘ ಅಮ್ಮಾ ಹೇಗೆ ಮರೆಯಲಿ ನಿನ್ನಾ ‘ ಗೀತೆಯನ್ನು ಖ್ಯಾತ ಸಂಗೀತ ನಿರ್ದೇಶಕ ಡಾ. ಹಂಸಲೇಖ ಬಿಡುಗಡೆ ಮಾಡಿದ್ದಾರೆ. ಗೀತೆಗೆ ಯೂಟ್ಯೂಬ್ ನಲ್ಲಿ ಒಳ್ಳೆ ಸ್ಪಂದನೆ ಕೂಡ ದೊರೆತಿದೆ.

Leave a Reply

Your email address will not be published. Required fields are marked *