ಶಿವಮೊಗ್ಗ, ಜುಲೈ 2, 2025: ಗಂಟಲು ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಶಿಕಾರಿಪುರ ನಗರವಾಸಿಯಾದ 60 ವರ್ಷದ ಮಹಿಳೆಯು, ಈ ಹಿಂದೆ ರೇಡಿಯೇಶನ್ ಚಿಕಿತ್ಸೆ ಪಡೆದುಕೊಂಡಿದ್ದು, ನಂತರ ತಪಾಸಣೆ ಮಾಡಿದ ಸಂದರ್ಭದಲ್ಲಿ ಕ್ಯಾನ್ಸರ್ ಉಳಿದುಕೊಂಡಿದ್ದ ಕಾರಣ, ಒಂದು ಅಪರೂಪದ ಶಸ್ತ್ರ ಚಿಕಿತ್ಸೆಯನ್ನು ಮಾಡುವ ಮೂಲಕ ಈ ಮಹಿಳೆಯನ್ನು ಸಂಪೂರ್ಣವಾಗಿ ಕ್ಯಾನ್ಸರ್ ನಿಂದ ಮುಕ್ತಮಾಡಲಾಗಿದೆ.
ಈ ಶಸ್ತ್ರ ಚಿಕಿತ್ಸೆಯು ದೇಶದ ಮೆಟ್ರೋ ನಗರಗಳಲ್ಲಿನ ಕೆಲವೇ ಕ್ಯಾನ್ಸರ್ ಆಸ್ಪತ್ರೆಗಳ ಮಟ್ಟದಲ್ಲಿ ನಡೆಸುವಂತಹ ಅತೀ ಅಪರೂಪದ ಶಸ್ತ್ರ ಚಿಕಿತ್ಸೆಯಾಗಿದ್ದು, ಇದನ್ನು ನಮ್ಮ ಶಿವಮೊಗ್ಗದ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆಯ ನುರಿತ ಕ್ಯಾನ್ಸರ್ ತಜ್ಞ ವೈದ್ಯರಿಂದ ಅತ್ಯಂತ ಯಶಸ್ವಿಯಾಗಿ ನಡೆಸಲಾಯಿತು.
ಈ ಅಪರೂಪದ ಶಸ್ತ್ರ ಚಿಕಿತ್ಸೆ ಮೇ ತಿಂಗಳಲ್ಲಿ ನಡೆದಿದ್ದು, ಈ ಮಹಿಳೆಯ ಗಂಟಲು ಭಾಗದಲ್ಲಿ ಕ್ಯಾನ್ಸರ್ ಖಾಯಿಲೆ ಕಾಣಿಸಿಕೊಂಡಂತಹ ನಾಳವನ್ನು ಸುಮಾರು 15 CM ನಷ್ಟು ಸಂಪೂರ್ಣವಾಗಿ ತೆಗೆದುಹಾಕಲಾಗಿದ್ದು, ಹಾಗೂ ಆ ತಗೆದು ಹಾಕಲಾದ ಗಂಟಲು ನಾಳದ ಭಾಗಕ್ಕೆ ಸಣ್ಣ ಕರುಳಿನ ಭಾಗವನ್ನು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆಯ ಮೂಲಕ ಜೋಡಣೆ ಮಾಡಲಾಯಿತು. ಇದರಿಂದ ಸಂಪೂರ್ಣವಾಗಿ ಕ್ಯಾನ್ಸರ್ ಖಾಯಿಲೆಯು ಗುಣ ಹೊಂದಿರುವುದು ಕಂಡುಬಂದಿರುತ್ತದೆ ಮತ್ತು ಈ ಮಹಿಳೆಯು ಎಂದಿನಂತೆ ಯಾವ ಅಡೆ ತಡೆಗಳು ಇಲ್ಲದೆ ಆಹಾರ ಸೇವನೆ ಮಾಡುತ್ತಿದ್ದು ಹಾಗೂ ತನ್ನ ದಿನ ನಿತ್ಯದ ಚಟುವಟಿಕೆಗಳನ್ನು ಯಾವ ತೊಂದರೆ ಇಲ್ಲದಂತೆ ನಡೆಸುತ್ತಿರುವುದು ಸಂತೋಷದ ವಿಚಾರವಾಗಿದೆ.

ಈ ಅಪರೂಪದ ಶಸ್ತ್ರ ಚಿಕಿತ್ಸೆಯಲ್ಲಿ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆಯ ನುರಿತ ಕ್ಯಾನ್ಸರ್ ತಜ್ಞ ವೈದ್ಯರುಗಳಾದ, ಡಾ. ದೀಪಕ್ ಹೆಚ್. ಎಲ್. – ಕ್ಯಾನ್ಸರ್ ಸರ್ಜನ್, ಡಾ. ಚೇತನ್ – ಮೈಕ್ರೋ ವ್ಯಾಸ್ಕ್ಯೂಲರ್ ಸರ್ಜನ್, ಡಾ. ರೋಷನ್ ಬಿ. ಎ. ರಾವ್ – ಕ್ಯಾನ್ಸರ್ ಸರ್ಜನ್, ಡಾ. ಸಂದೇಶ್ – ಜನರಲ್ ಸರ್ಜನ್ ಹಾಗೂ ಅರವಳಿಕೆ ತಜ್ಞರಾದ ಡಾ. ವಾದಿರಾಜ್ ಕುಲ್ಕರ್ಣಿ, ಡಾ. ಜಿ.ಎಲ್. ರವೀಂದ್ರ ತಂಡವು ಭಾಗಿಯಾಗಿದ್ದರು.
