ತೆರೆಗೆ ಬರಲು ಸಿದ್ಧವಾಗಿದ್ದಾಳೆ ‘ಸುಲೋಚನ’

ಮೈಮ್ ರಮೇಶ್, ಹರಿ ಕಾವ್ಯ, ಹನೀಫ್ ಎ, ಧರ್ಮೇಶ್ ಎಂ.ಎಸ್., ಮತ್ತು ಪದ್ಮಶ್ರೀ ಅವರು ‘ಸುಲೋಚನಾ’ ಚಲನಚಿತ್ರದ ಪೋಸ್ಟರ್ ಅನ್ನು ಅನಾವರಣಗೊಳಿಸಿದರು.

ಮೈಸೂರು, 13 ಆಗಸ್ಟ್ 2024: ಕಲಾವಿದರಾದ ಎಂ.ಎಸ್.ಧರ್ಮೇಶ್ ನಿರ್ಮಿಸಿ ನಿರ್ದೇಶಿಸಿರುವ ‘ಸುಲೋಚನ’ ಕಿರುಚಿತ್ರದ ಪೋಸ್ಟರ್ ಅನ್ನು ರಂಗಾಯಣದ ನಿವೃತ್ತ ಕಲಾವಿದರಾದ ಮೈಮ್ ರಮೇಶ್ ಅವರು ಬಿಡುಗಡೆ ಮಾಡಿದರು.

ಇದೇ ವೇಳೆ ಮಾತನಾಡಿದ ಮೈಮ್ ರಮೇಶ್, ನಮ್ಮ ಗರಡಿಯಲ್ಲೇ ಬೆಳೆದಿರುವ ನಿರ್ದೇಶಕ ಎಂ.ಎಸ್.ಧರ್ಮೇಶ್ ಸಾಮಾಜಿಕ ಕಾಳಜಿಯೊಂದಿಗೆ ತಯಾರಿಸಿರುವ ಈ ಚಿತ್ರ ಯಶಸ್ವಿ ಪ್ರದರ್ಶನ ಕಾಣಲಿ ಎಂದು ಹಾರೈಸುವೆ. ಇವರೊಟ್ಟಿಗೆ ದುಡಿದಿರುವ ಯುವ ತಂಡ ಕೂಡ ಬಹುಕಾಲ ರಂಗಭೂಮಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದವರು. ಅಲ್ಲಿ ಕಲಿತ ಕಲೆಯನ್ನು ತೆರೆಯ ಮೇಲೆ ತರಲು ಪ್ರಯತ್ನಿಸಿದ್ದಾರೆ. ಇಂದಿನ ದಿನಮಾನಗಳಲ್ಲಿ ಬಹುತೇಕ ಚಿತ್ರಮಂದಿ ಕಮರ್ಷಿಯಲ್ ಹಿಂದೆ ಬಿದ್ದು, ಚಿತ್ರದ ಸಂದೇಶವನ್ನೇ ಮರೆತುಬಿಡುವ ಹಂತಕ್ಕೆ ತಲುಪಿದ್ದಾರೆ. ಹೀಗಿದ್ದೂ ಕಮರ್ಷಿಯಲ್ ಬಗ್ಗೆ ಚಿಂತಿಸದೆ ಸಮಾಜಕ್ಕೆ ಸಂದೇಶ ನೀಡಲು ಹವಣಿಸುತ್ತಿರುವ ಈ ಯುವ ತಂಡವನ್ನು ನಾವೆಲ್ಲರೂ ಪ್ರೋತ್ಸಾಹಿಸಬೇಕಿದೆ ಎಂದು ನುಡಿದರು.

ಈ ಕಿರುಚಿತ್ರವನ್ನು ಮಂಗಳೂರು, ಮೈಸೂರು ಸುತ್ತಮುತ್ತ ಚಿತ್ರೀಕರಿಸಿ, ತೆರೆಗೆ ಸಿದ್ಧವಾಗಿರುವ ಚಿತ್ರವು ಇನ್ನೂ ಪ್ರೀಮಿಯರ್ ಶೋ ಕಂಡಿಲ್ಲ. ಈ ನಡುವೆ ರಾಷ್ಟ್ರದ ವಿವಿಧೆಡೆ ನಡೆಯುವ ಚಲನಚಿತ್ರೋತ್ಸವದಲ್ಲೂ ಚಿತ್ರ ಯಶಸ್ವಿ ಪ್ರದರ್ಶನ ಕಂಡಿದ್ದು, ಪ್ರಾಜ್ಞರ ಮೆಚ್ಚುಗೆಗೆ ಪಾತ್ರವಾಗಿದೆ. ಗೋವಾ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಗೂ ಆಯ್ಕೆಯಾಗಿದೆ. ಕೋಲ್ಕತ್ತಾದ ಇಂಡಿಯನ್ ಇಂಡಿಪೆಂಡೆಂಟ್ ಫಿಲ್ಮ್ ಫೆಸ್ಟಿವಲ್ ಗೂ ಆಯ್ಕೆಯಾಗಿ ಪ್ರಶಸ್ತಿ ಬಾಚಿಕೊಂಡಿದೆ.

ಯುವ ಕಲಾವಿದರ ದಂಡೆ ತಿಂಗಳಿಡಿ ತೊಡಗಿಸಿಕೊಂಡು ನಿರ್ಮಿಸಿರುವ ಈ ಚಿತ್ರವು ಸಾಮಾಜಿಕ ಕಾಳಜಿಯ ಕಥಾ ಹಂದರವನ್ನು ಒಳಗೊಂಡಿದೆ. ಇಂದಿನ ಯುವ ಪೀಳಿಗೆ ಅದರಲ್ಲೂ ಓದು ಬರಹದಿಂದ ದೂರವಿರುವ ಮಕ್ಕಳ ವರ್ಗ ವ್ಯವಸ್ಥೆಯ ಗತ್ಯಂತರಕ್ಕೆ ಸಿಲುಕಿ ತಮಗರಿವಿಲ್ಲದೆಯೇ ದುಶ್ಚಟಗಳಿಗೆ ಬಿದ್ದು ಅನುಭವಿಸುವ ಬದುಕಿನ ಜಂಜಡತೆಯೇ ಈ ಚಿತ್ರದ ಮುಖ್ಯ ತಿರುಳು. ಈ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಓರ್ವ ಮಹಿಳೆ ಶ್ರಮಿಸುವ ಪಡಿಪಾಟಲು, ಆಕೆಗೂ ಸಮಾಜದ ಕಾಮದ ಕಣ್ಣುಗಳ ಸ್ಕ್ಯಾನ್ ಕೂಡ ಹಾದು ಹೋಗುವಾಗ ಪ್ರೇಕ್ಷಕರ ಮನದಲ್ಲಿ ಜಿನುಗುವ ತಳಮಳ ನಮ್ಮ ಗಮನಕ್ಕೂ ಬಾರದೆ ಇರದು.

ಮುಖ್ಯ ಪಾತ್ರದಲ್ಲಿ ಸಂಪತ್ ಮೈತ್ರೇಯ, ನಾಯಕಿಯಾಗಿ ಪದ್ಮಶ್ರೀ ಮಹಾಲೆ ಕಾಣಿಸಿಕೊಂಡಿದ್ದಾರೆ. ಪೋಷಕ ನಟರಾಗಿ ಮಹೇಶ್ವರ, ಅಭಿ, ವಿಶಾಲ್ ಮಹಾಲೆ ಮತ್ತಿತರರು ಪಾತ್ರವರ್ಗದಲ್ಲಿ ಮಿಂಚಿದ್ದಾರೆ. ಸಂಗೀತ ಸಂಯೋಜನೆ ಹರಿಕಾವ್ಯ, ಛಾಯಾಗ್ರಹಣ ರಾಘವೇಂದ್ರ ಶಾಸ್ತ್ರಿ, ಸಂಕಲನ ದೀಪು ಹಾಸನ್ ನಿರ್ವಹಿಸಿದ್ದಾರೆ. ಹಿರಿಯ ಪತ್ರಕರ್ತ ಸಿದ್ದು ಪ್ರಸನ್ನ ಸಂಭಾಷಣೆ- ಸಾಹಿತ್ಯ ರಚಿಸಿದ್ದು, ನೆಲಮೂಲದ ಭಾಷೆಗೆ ಈ ಕಿರುಚಿತ್ರ ಹತ್ತಿರವಿದೆ.

ಪೋಸ್ಟರ್ ಬಿಡುಗಡೆ ಸಂದರ್ಭದಲ್ಲಿ ಸಂಗೀತ ನಿರ್ದೇಶಕ ಹರಿಕಾವ್ಯ, ನಟಿ ಪದ್ಮಶ್ರೀ ಮಹಾಲೆ, ನಟರಾದ ಮಾಸ್ಟರ್ ತೇಜಸ್, ಅಭಿರಾಮ್, ಅನಿಮಿಷ, ಸಹ ನಿರ್ದೇಶಕ ಸೋಮುಕುಮಾರ್ ಶಂಭೇಗೌಡ, ಸಂಭಾಷಣೆಕಾರ ಬಿ.ಎನ್‌.ಸಿದ್ದುಪ್ರಸನ್ನ, ಮೊಹಮ್ಮದ್ ಹನೀಫ್, ಮೊಹಮ್ಮದ್ ಸಿದ್ದಿಖ್, ಮೀಡಿಯಾ ಗ್ರಾಮ್‌ನ ಹಬೀಬುಲ್ಲಾ ಎಸ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *