ಮೈಸೂರು, ಆಗಸ್ಟ್ 13, 2026: ಮೈಸೂರು ನಗರದ ವಾರ್ಡ್ 10ರ ವ್ಯಾಪ್ತಿಯ ಇಡನ್ ಗಾರ್ಡನ್ ಪ್ರದೇಶದಲ್ಲಿ ಹಲವು ದಿನಗಳಿಂದ ಕಸ-ಕಡ್ಡಿ ಹಾಗೂ ವಿವಿಧ ರೀತಿಯ ತ್ಯಾಜ್ಯದಿಂದ ಜನರು ಎದುರಿಸುತ್ತಿದ್ದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಇಂದು ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಬೃಹತ್ ಹಾಗೂ ವಿಶೇಷ ಸ್ವಚ್ಛತಾ ಅಭಿಯಾನ ನಡೆಯಿತು.

80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ 80 ಕಸದ ಪಾಯಿಂಟ್ (GV Points) ಸ್ವಚ್ಛಗೊಳಿಸುವ ಅಭಿಯಾನ: ದೇಶದ 80ನೇ ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದ ಅಂಗವಾಗಿ ಮೈಸೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸದ ರಾಶಿ ಬಿದ್ದಿರುವ 80 ಜಿವಿ ಪಾಯಿಂಟ್ಗಳನ್ನು (Garbage Vulnerable Points) ಗುರುತಿಸಿ, ಆಯಾ ಪ್ರದೇಶಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವಂತೆ ಮಾನ್ಯ ಮಹಾನಗರ ಪಾಲಿಕೆ ಆಯುಕ್ತರು ಶ್ರೀಮತಿ ಎಂ.ಕೆ. ಸವಿತಾ ಆದೇಶ ಹೊರಡಿಸಿದ್ದಾರೆ. ಅದರಂತೆ, ಇಂದು ಈ ವಿಶೇಷ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಈ ಬೃಹತ್ ಅಭಿಯಾನವು ಆಗಸ್ಟ್ 31ರ ವರೆಗೆ ನಿರಂತರವಾಗಿ ನಡೆಯಲಿದ್ದು, ಕಸ ತೆರವುಗೊಳಿಸಿದ ಸ್ಥಳಗಳಲ್ಲಿ ಗಿಡಗಳನ್ನು ನೆಡುವುದು, ರಂಗೋಲಿ ಹಾಕುವುದು ಹಾಗೂ ವಾಲ್ ಪೇಂಟಿಂಗ್ (ಗೋಡೆ ಚಿತ್ರಕಲೆ) ಮಾಡುವ ಮೂಲಕ ಪ್ರದೇಶ ಸೌಂದರ್ಯೀಕರಣಗೊಳಿಸುವ ಯೋಜನೆ ರೂಪಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಆಯಾ ಪ್ರದೇಶದ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಸಕ್ರಿಯವಾಗಿ ಕೈಜೋಡಿಸಬೇಕೆಂದು ಆಯುಕ್ತರು ಕರೆ ನೀಡಿದ್ದಾರೆ.
ಸ್ಥಳೀಯರ ದೂರು ಹಾಗೂ ಭೇಟಿ:

ಇಡನ್ ಗಾರ್ಡನ್ ಪ್ರದೇಶವು ಹಲವು ಆಸ್ಪತ್ರೆಗಳ ಸಮೀಪದಲ್ಲಿರುವುದರಿಂದ, ಇಲ್ಲಿ ವೈದ್ಯಕೀಯ ತ್ಯಾಜ್ಯ ಸೇರಿದಂತೆ ವಿವಿಧ ರೀತಿಯ ತ್ಯಾಜ್ಯಗಳನ್ನು ಕೆಲವರು ತಂದು ಸುರಿಯುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ದೂರಿದರು. ಅಲ್ಲದೆ, ಚಿಕನ್ ಹಾಗೂ ಮಟನ್ ಅಂಗಡಿಗಳಿಂದ ಹೊರಬರುವ ಪ್ರಾಣಿಜನ್ಯ ತ್ಯಾಜ್ಯವನ್ನೂ ಇಲ್ಲೇ ಹಾಕಲಾಗುತ್ತಿತ್ತು. ಇದರಿಂದ ದುರ್ವಾಸನೆ, ಸೊಳ್ಳೆ-ನೊಣಗಳ ಕಾಟ ಹೆಚ್ಚಾಗಿ
ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿತ್ತು. ಸಾರ್ವಜನಿಕರ ದೂರಿಗೆ ತಕ್ಷಣ ಸ್ಪಂದಿಸಿದ ಪಾಲಿಕೆ ಆಯುಕ್ತರಾದ ಶ್ರೀಮತಿ ಎಂ.ಕೆ. ಸವಿತಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿ, ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು.
ಬೀದಿ ದೀಪ ಹಾಗೂ ಸಿಟಿವಿ ಕ್ಯಾಮೆರಾ ಅಳವಡಿಕೆಗೆ ಭರವಸೆ:


ಇದೇ ಸಂದರ್ಭದಲ್ಲಿ, ಪ್ರದೇಶದಲ್ಲಿ ಕಸದ ಸಮಸ್ಯೆಯ ಜೊತೆಗೆ ಸರಿಯಾದ ಬೀದಿ ದೀಪಗಳ ವ್ಯವಸ್ಥೆ ಇಲ್ಲದಿರುವುದರಿಂದ ಅನೈತಿಕ ಹಾಗೂ ಅಕ್ರಮ ಚಟುವಟಿಕೆಗಳು (Unethical practices) ನಡೆಯುತ್ತಿವೆ ಎಂದು ಸ್ಥಳೀಯರು ಆಯುಕ್ತರ ಗಮನಕ್ಕೆ ತಂದರು. ಆದ್ದರಿಂದ ಅತೀ ಶೀಘ್ರವಾಗಿ ಬೀದಿ ದೀಪಗಳನ್ನು ಹಾಗೂ ಸಿಟಿವಿ (CCTV) ಕ್ಯಾಮೆರಾಗಳನ್ನು ಅಳವಡಿಸಬೇಕೆಂದು ಮನವಿ ಮಾಡಿದರು. ಸಾರ್ವಜನಿಕರ ಮನವಿಗೆ ಧನಾತ್ಮಕವಾಗಿ ಸ್ಪಂದಿಸಿದ ಆಯುಕ್ತರು, ಅತೀ ಶೀಘ್ರದಲ್ಲಿಯೇ ಈ ಎಲ್ಲಾ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.
ಅಧಿಕಾರಿಗಳು, ಸ್ವಯಂಸೇವಕರು ಹಾಗೂ ಗಣ್ಯರ ಭಾಗಿ:

ಮಹಾನಗರ ಪಾಲಿಕೆ ಆಯುಕ್ತರ ನೇತೃತ್ವದಲ್ಲಿ ನಡೆದ ಈ ಅಭಿಯಾನದಲ್ಲಿ ಪ್ರಾದೇಶಿಕ ಆಯುಕ್ತರು, ಉಪ ಆಯುಕ್ತರು, ಹೆಲ್ತ್ ಇನ್ಸ್ಪೆಕ್ಟರ್ಗಳು, ಎನ್ವಿರಾನ್ಮೆಂಟಲ್ ಇಂಜಿನಿಯರ್ಗಳು, ಪೌರಕಾರ್ಮಿಕರು, 10ನೇ ವಾರ್ಡಿನ ಸ್ವಯಂಸೇವಕರು, ವಿವಿಧ ಎನ್ಜಿಒಗಳ ಪ್ರತಿನಿಧಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸಿ ಅಪಾರ ಪ್ರಮಾಣದ ತ್ಯಾಜ್ಯವನ್ನು ತೆರವುಗೊಳಿಸಿದರು.
ಕಾರ್ಯಕ್ರಮವು ಸ್ಥಳೀಯ ಸಮಾಜ ಸೇವಕರಾದ ಕೌನೈನ್ ಮಿರ್ಜಾ, ಖಲೀಲುಲ್ಲಾ ಖಾನ್, ಅಬ್ದುಲ್ ವಾಜಿದ್, ಯೂನಿಕ್ ಯೂಥ್ ಫೌಂಡೇಶನ್ನ ವಕೀಲರಾದ ಮುದಸ್ಸಿರ್ ಅಲಿ ಖಾನ್ ಹಾಗೂ ಅಜ್ಮಾಲ್ ಅವರ ಸಾರಥ್ಯದಲ್ಲಿ ನೆರವೇರಿತು. ಅಲ್ಲದೆ ಮೀಡಿಯಾಗ್ರಂ ಎಡಿಟರ್ ಶ್ರೀ ಹಬೀಬುಲ್ಲಾ ಅವರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಭಿಯಾನಕ್ಕೆ ಬೆಂಬಲ ಸೂಚಿಸಿದರು.
ನಿರಂತರ ಸ್ವಚ್ಛತೆಗೆ ಒತ್ತಾಯ:


ಒಂದು ದಿನದ ಈ ವಿಶೇಷ ಸ್ವಚ್ಛತಾ ಕಾರ್ಯದಿಂದ ಇಡನ್ ಗಾರ್ಡನ್ ಪ್ರದೇಶವು ಸಂಪೂರ್ಣ ಸ್ವಚ್ಛಗೊಂಡಿದ್ದರೂ, ಇಂತಹ ಸ್ವಚ್ಛತಾ ಕಾರ್ಯ ಪ್ರತಿದಿನವೂ ನಿರಂತರವಾಗಿ ನಡೆಯಬೇಕು ಹಾಗೂ ಮತ್ತೆ ಯಾರೂ ಇಲ್ಲಿ ಕಸ ಸುರಿಯದಂತೆ ಪಾಲಿಕೆಯು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಪಾಲಿಕೆಯನ್ನು ಒತ್ತಾಯಿಸಿದರು.